ಕನಸಿನ ಕಣ್ಮಣಿ, ಸ್ವಪ್ನ ಸುಂದರಿ, ಕಲ್ಪನಾ ಕನ್ಯೆ, ಭಾವಿ ಬಾಳಿನ ಸುಪ್ತದೀಪ್ತೀ... ಈವರೆಗೂ ನನ್ನ ಕೈಗೆ ಸಿಗದೆ, ಕಣ್ಣಿಗೂ ಕಾಣದೆ ಇಲ್ಲೇ ಎಲ್ಲೋ ಇರುವ ನಿನ್ನನ್ನ ಏನಂತ ಕರೆಯಲಿ? ನೀ ಎಲ್ಲಿರುವೆ, ಹೇಗಿರುವೆ ಎಂಬ ಸ್ಪಷ್ಟವಾದೊಂದು ಕಲ್ಪನೆಯೂ ಇಲ್ಲದೇ ನಿನಗೀ ಪತ್ರ ಬರೆಯುತ್ತಿದ್ದೇನೆ. ನೀ ಎಲ್ಲಾದರೂ ಇರು, ಹೇಗಾದರೂ ಇರು, ನಮ್ಮಿಬ್ಬರ ಮದುವೆ ಯಾವತ್ತೋ ಸ್ವರ್ಗದಲ್ಲೇ ನೆರವೇರಿರುವುದರಿಂದ ನೀ ನನಗೆ ಒಂದಿಲ್ಲೊಂದು ದಿನ ಸಿಕ್ಕೇ ಸಿಗ್ತೀಯ
ನಿಂಗೊತ್ತಾ? ನಿನ್ನ ಬಗ್ಗೆ ಒಂದು ಅಮೂರ್ತ ಕಲ್ಪನೆಯಿಟ್ಟುಕೊಂಡೇ ಪ್ರತಿನಿತ್ಯ ನೋಡುವ ಪ್ರತಿ ಹುಡುಗಿಯಲ್ಲೂ ನಿನ್ನನ್ನ ಹುಡುಕ್ತಾ ಇರ್ತೀನಿ. ನಾ ಪ್ರತಿನಿತ್ಯ ನಡೆದುಕೊಂಡು ಹೋಗುವ ಹಾದಿಯಲ್ಲಿ ಎದಿರಾಗುವ ಪ್ರತಿ ಹುಡುಗಿಯಲ್ಲಿ, ಬಸ್ಟ್ಯಾಂಡಿನಲ್ಲಿ ನನ್ನೊಂದಿಗೆ ಬಸ್ಸಿಗೆ ಕಾಯುತ್ತಾ ನಿಲ್ಲುವ ಪ್ರತಿ ಹುಡುಗಿಯಲ್ಲಿ, ಹತ್ತಿದ ಬಸ್ಸಿನಲ್ಲಿ ಸೀಟು ಸಿಗದೆ ನಿಂತ ಪ್ರತಿ ನೀಳಕಾಯದ ಶ್ವೇತಸುಂದರಿಯಲ್ಲಿ, ಊರಿಗೆ ಹೋಗುವಾಗ ರೈಲಿನಲ್ಲಿ ಜೊತೆಯಾಗುವ ಪ್ರತಿ ಲಲನಾಮಣಿಯಲ್ಲಿ, ಗೆಳೆಯರೊಂದಿಗೆ ಬೀದಿ ಸುತ್ತುವಾಗ ನೋಡುವ ಪ್ರತಿ ಹುಡುಗಿಯಲ್ಲಿ, ಹೊಟೇಲಿನಲ್ಲಿ ಊಟ ಮಾಡುವಾಗ ಗೆಳತಿಯರೊಂದಿಗೋ ಇಲ್ಲ ಅಪ್ಪ-ಅಮ್ಮನೊಂದಿಗೋ ಬಂದು ಎದುರಿನ ಟೇಬಲ್ಲಿನಲ್ಲಿ ಆಸೀನಳಾಗಿ ಥೇಟ್ ನನ್ ಥರಾನೇ "ತಿನ್ನೋಕೆ ಏನು ಆರ್ಡರ್ ಮಾಡೋದು?" ಎಂದು ಪೇಚಾಡುವ ಪ್ರತಿ ಪೆದ್ದುಮಣಿಯಲ್ಲಿ, ಗೆಳೆಯನೊಬ್ಬನ ಮದುವೆಯಲ್ಲಿ ವಧುವಿಗಿಂತಲೂ ಚೆನ್ನಾಗಿ ಸಿಂಗರಿಸಿಕೊಂಡು ಜಿಂಕೆ ಮರಿಯಂತೆ ಅತ್ತಿಂದಿತ್ತ ಓಡಾಡುವ ವಧುವಿನ ಗೆಳತಿಯರಲ್ಲಿ, ವಾರಾಂತ್ಯದಲ್ಲಿ ದೇವರ ದರ್ಶನಕ್ಕಾಗಿ ನಾ ಹೋಗುವ ದೇವಸ್ಥಾನಕ್ಕೆ "ನನಗೊಬ್ಬ ಒಳ್ಳೆಯ ಗಂಡನನ್ನು ದಯಪಾಲಿಸು ತಂದೇ" ಎಂದು ದೇವರಲ್ಲಿ ಮೊರೆಯಿಡಲು ಬರುವ ಪ್ರತಿ ಭಕ್ತ ಹುಡುಗಿಯಲ್ಲಿ, ಶಾಪಿಂಗ್ ಮಾಲ್ ನಲ್ಲಿ ಕೊಳ್ಳಲು ಬಂದಿದ್ದನ್ನು ಮರೆತು ಕಣ್ಣಿನಲ್ಲೇ ಬೇರೆ ಇನ್ನೇನನ್ನೋ ಹುಡುಕುವ ಕನ್ಫ್ಯೂಸ್ಡ್ ಹುಡುಗಿಯರಲ್ಲಿ,.... ಹೀಗೆ ಪ್ರತಿನಿತ್ಯ ಎದುರಾಗುವ ಪ್ರತಿ ಸಾಧಾರಣ ಸುಂದರಿಯಲ್ಲೂ ನಿನ್ನ ಸಾಕಾರ ರೂಪ ಕಾಣೋಕೆ ಹವಣಿಸ್ತಿರ್ತೀನಿ.
ಆದರೆ ಕೊನೆಗೆ, ಹೀಗೆ ನೋಡುವ ಪ್ರತಿ ಹುಡುಗಿಯಲ್ಲೂ ನಿನ್ನನ್ನ ಕಾಣದೆ ನಿರಾಶೆಗೊಳ್ತೀನಿ. ಪ್ರತಿಯೊಬ್ಬಳನ್ನೂ, ಛೇ! ಇವಳು ಸ್ವಲ್ಪ ಜಾಸ್ತೀನೇ ಮಾಡರ್ನ್; ನಮ್ಮ ಸಂಪ್ರದಾಯಸ್ಥ ಮನೆಗೆ ಸರಿ ಹೋಗಲ್ಲ,... ಉಹೂಂ, ಇವಳಿಗ್ಯಾಕೋ ಸ್ವಲ್ಪ ಕೊಬ್ಬು ಜಾಸ್ತಿ ಅನ್ಸುತ್ತೆ,... ಅರೆ! ಇವಳು ಈಗ ಸ್ವಲ್ಪ ಹಿಂದೆ ಅಂದುಕೊಂಡಷ್ಟು ಚೆನ್ನಾಗಿಲ್ಲ,... ಹ್ಮ್! ಇವಳ್ಯಾಕೋ ತುಂಬಾನೆ ಚೈಲ್ಡಿಶ್ ಅನ್ಸುತ್ತೆ,... ಅಯ್ಯೋ ಬೇಡಪ್ಪ - ನಾ ದುಡಿಯೋದೆಲ್ಲಾ ಇವಳ ಮೇಕಪ್ಪಿಗೇ ಸರಿ ಹೋಗುತ್ತೆ,... ಇವಳ್ಯಾಕೋ ತುಂಬಾನೆ ಚೆನ್ನಾಗಿದಾಳೆ - ಗಗನ ಕುಸುಮ!,... ಅಯ್ಯಪ್ಪ, ಇವಳು ತೀರಾ ದಪ್ಪ ಇದಾಳೆ,... ಅಯ್ಯೋ ಬೇಡ - ಇವಳ ನಖರಾ ಯಾಕೋ ಜಾಸ್ತಿಯಾಯ್ತು,... ಹ್ಮ್! ಇದು ನನಗೆ ಸಿಗದ ಹುಳಿ ದ್ರಾಕ್ಷಿ,... ಅಬ್ಬಾ! ಇವಳಾಡೋದು ನೋಡಿದ್ರೆ ಇವಳು ನನ್ನೊಂದಿಗೆ ಮತ್ತು ನಮ್ಮ ಮನೆಯವರೊಂದಿಗೆ ಹೊಂದಿಕೊಳ್ಳೋ ಚಾನ್ಸೇ ಇಲ್ಲ,... ಎಲ್ಲ ಸರಿ - ಆದ್ರೆ ಇವಳನ್ನ ನನ್ನ ಅಪ್ಪ-ಅಮ್ಮ ಒಪ್ಕೊಳ್ಳೋದು ಡೌಟು,... ಹೀಗೆ ಒಂದಿಲ್ಲೊಂದು ಕಾರಣದಿಂದ 'ಅವಳು' ನೀನಲ್ಲ ಎಂಬ ತೀರ್ಮಾನಕ್ಕೆ ಬಂದಿರ್ತೇನೆ :)
ನಿನ್ನ ಬಗೆಗಿನ ನನ್ನ ಅಪಕ್ವ ಕಲ್ಪನೆಗಳೆಲ್ಲ ಒತ್ತಟ್ಟಿಗಿರಲಿ; ಅಸಲಿಗೆ ನೀನು ಇರುವುದಾದರೂ ಹೇಗೆ? ನಾನೋ ಒಬ್ಬ ಸಾಮಾನ್ಯ, ಮಧ್ಯಮ ವರ್ಗದ ಹುಡುಗ. ಸ್ವಲ್ಪ ಹೆಚ್ಚೇ ಅನಿಸುವಷ್ಟು ಭಾವುಕ; ನಾನೇ ಹೇಳ್ಕೊಳ್ಳೋ ಹಾಗೆ - ಜೀವನದ ಪ್ರತಿ ಪುಟ್ಟ ಸಂತಸದಲ್ಲೂ ಸಂಭ್ರಮಿಸುವ ಭಾವಜೀವಿ. ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ; ಆದ್ರೆ, ತುಂಬಾ ಹತ್ತಿರದವರನ್ನ ನನ್ನನ್ನು ನಾನೇ ಪ್ರೀತಿಸದಷ್ಟು ಹೆಚ್ಚಾಗಿ ಪ್ರೀತಿಸ್ತೇನೆ ಮತ್ತು ಗೌರವಿಸ್ತೇನೆ. ನೀನೂ ನನ್ನಂತೆ ನಾ? ನೀನೂ ನನ್ನಂತೆ ಭಾವಜೀವಿಯಾ?
ನನ್ನಂತೆ ಮಿತಭಾಷೀಯಾ ಅಥವಾ ಬಾಯಿ ಹರಿದು ಹೋಗುವಂತೆ ಇಪ್ಪತ್ನಾಲ್ಕು ಗಂಟೆನೂ ವಟವಟಾ ಅಂತ ವಟಗುಡ್ತಿರ್ತೀಯ :) ? ನನ್ನಂತೆ ನೀನೂ ಕಿಶೋರ್, ಲತಾ, ಸೋನು, ಶ್ರೇಯಾ, ಪೀ ಬೀ ಎಸ್, ರಾಜ್ಕುಮಾರ್, ಜಾನಕಿ, ಎಸ್ ಪೀ ಬೀ ಹಾಡುಗಳನ್ನು ಇಷ್ಟ ಪಡ್ತೀಯ?
ಗೆಳೆಯನೋ, ಗೆಳತಿಯೋ ಮುಖ ಚಿಕ್ಕದು ಮಾಡಿಕೊಂಡು ಕುಳಿತಾಗ ಕಳವಳಗೊಂಡು"ಏನಾಯ್ತೋ" ಎಂದು ಆತ್ಮೀಯತೆಯಿಂದ ವಿಚಾರಿಸ್ತೀಯ? ನೀನೂ ನನ್ ಥರಾ ಹೀಗೆಯೇ ನಾನೆಲ್ಲಿದೀನಿ, ಹೇಗೀದೀನಿ ಅನ್ನೋ ಪುಟ್ಟದೊಂದು ಅಂದಾಜೂ ಇಲ್ಲದೇ ನಂಗೋಸ್ಕರ ಪತ್ರ, ಕವನ ಏನಾದ್ರೂ ಬರೀತಾ ಇದೀಯಾ?
ಕೆಲವು ಸಂದರ್ಭಗಳಲ್ಲಿ ನಿನ್ನ ಅನುಪಸ್ಥಿತಿ ನನ್ನ ತುಂಬಾ ಕಾಡುತ್ತೆ ಕಣೇ, ಅಡುಗೆ ಮಾಡ್ಕೊಳ್ಳೋಕೆ ಪ್ರಯತ್ನ ಪಡ್ತಾ ಕೈ ಸುಟ್ಟುಕೊಂಡಾಗ, ಏನೋ ಅಡುಗೆ ಮಾಡೋಕೆ ಹೋಗಿ ಅದು ಇನ್ನೇನೋ ಆದಾಗ, ಆಟವಾಡುತ್ತಿದ್ದಾಗ, ನಿನ್ನನ್ನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಂಡೆ; ನೀನೂ ಜೊತೆಗಿದ್ದಿದ್ದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ ಅಂತ.
ನಾಳೆ ಮದುವೆಯಾದ ಮೇಲೆ, ನಿನ್ನ ಅಪ್ಪ-ಅಮ್ಮನನ್ನು ಕಂಡಷ್ಟೇ ಪ್ರೀತ್ಯಾದರಗಳಿಂದ ನನ್ನ ಅಪ್ಪ-ಅಮ್ಮನನ್ನೂ ಕಾಣಬಲ್ಲೆಯಾ? ನಾ ಚಿಕ್ಕದೊಂದು ಗೆಲುವಿನೊಂದಿಗೆ ಮನೆಗೆ ಬಂದಾಗ ಒಂದು ಹೆಮ್ಮೆಯ ಮುಗುಳ್ನಗೆಯೊಂದಿಗೆ ನನ್ನ ಸ್ವಾಗತಿಸ್ತೀಯಾ? ಸೋತು ಸುಣ್ಣವಾಗಿ ಬಂದಾಗ ಎರಡು ಸಾಂತ್ವನದ ನುಡಿಗಳನ್ನು ಹೇಳಿ ಮತ್ತೆ ನನ್ನನ್ನು ಚೈತನ್ಯದ ಚಿಲುಮೆಯಾಗಿಸ್ತೀಯಾ? ಕೃಷಿಯಾಧಾರಿತ, ಮಧ್ಯಮವರ್ಗದ, ಸಂಪ್ರದಾಯಸ್ಥ ಮನೆ ನಮ್ಮದು; ನಮ್ಮ ಮನೆಯ ಸಂಪ್ರದಾಯ, ಶಿಷ್ಟಾಚಾರಗಳನ್ನು ನನ್ನಷ್ಟೇ ಶ್ರದ್ಧೆಯಿಂದ ಪಾಲಿಸ್ತೀಯಾ? ಹುಣ್ಣಿಮೆ ಬೆಳದಿಂಗಳಲ್ಲಿ ನನ್ ಜೊತೆ ಕೂತ್ಕೊಂಡು ಚುಕ್ಕಿಗಳನ್ನು ಎಣಿಸೋಕೆ ಹೆಲ್ಪ್ ಮಾಡ್ತೀಯಾ? ಮತ್ತೆ, ನಾ ಆಫೀಸಿನಿಂದ ಲೇಟಾಗಿ ಬಂದಾಗ ಹುಸಿಗೋಪ ತೋರಿಸಿ "ನಾಳೆಯಿಂದ ಬೇಗ ಬರ್ದಿದ್ರೆ ನಿಮ್ಗೆ ಊಟ ಇಲ್ಲ!" ಅಂತ ಹೆದ್ರಿಸ್ತೀಯ? ಚಿಕ್ಕದೊಂದು ನಿರುಪದ್ರವಿ ಸುಳ್ಳು ಹೇಳಿ ಸಿಕ್ಕಿಬಿದ್ದಾಗ ನನ್ನ ಕಿವಿ ಹಿಂಡಿ "ಇನ್ನೊಂದು ಸಲ ಸುಳ್ಳು ಹೇಳಿದ್ರೆ ನಾ ನನ್ನ ತವರು ಮನೆಗೆ ಹೊರ್ಟೋಗ್ತೀನಿ" ಅಂತ ಹೇಳಿ ನಂಗೆ ಭಯ ಬೀಳಿಸ್ತೀಯ? ಏನೋ ಒಂದು ತರ್ಲೆ ಮಾಡಿ ನನ್ಹತ್ರ ಬೈಸಿಕೊಂಡಾಗ ಪುಟ್ಟ ಮಗುವಿನಂತೆ ಗಲ್ಲ ಊದಿಸಿಕೊಂಡು ಕೂಡ್ತೀಯಾ? ಇಷ್ಟೆಲ್ಲಾ ನಿರೀಕ್ಷೆ ತುಂಬಾ ಜಾಸ್ತಿ ಅನ್ನಿಸಿದ್ರೆ, ಕಡೆ ಪಕ್ಷ ನನ್ನ ನಗುವಿಗೆ ನಗುವಾಗಿ, ಅಳುವಿಗೆ ಅಳುವಾಗಿ ಸಾಥ್ ನೀಡಬಲ್ಲೆಯಾ? ನಿನ್ನಿಂದ ನಾನು ಇಷ್ಟೇ-ಇಷ್ಟು ಸಾಮಾನ್ಯ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾ? ಹಾಂ! ಚಿಂತೆಬೇಡ; ಅಷ್ಟು ನಿರೀಕ್ಷೆಗಳನ್ನು ನೀನೂ ನನ್ನ ಬಗ್ಗೆ ಇಟ್ಟುಕೋಬಹುದು ಮತ್ತು ನಿನ್ನ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಬಲ್ಲೆ. ಹೇಳು, ಕಷ್ಟ-ಸುಖ ಏನೇ ಬರಲಿ, ನೀನು ನನ್ನ ಬಿಟ್ಟು ಇರಲ್ಲ ಅಲ್ಲ್ವಾ..?
ಸಾಧಾರಣ, ಮಧ್ಯಮ ವರ್ಗದ ಮನೆತನದಲ್ಲಿ ಹುಟ್ಟಿ, ಕೃಷಿಕ ಮನೆತನದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಈ ಮಟ್ಟಕ್ಕೆ ಬೆಳೆಯಲು ತುಂಬಾ ಕಷ್ಟ ಪಟ್ಟಿದ್ದೇನೆ, ಸಾಕಷ್ಟು ತ್ಯಾಗ ಮಾಡಿದ್ದೇನೆ. ಬಳಲಿ ಬೆಂಡಾಗಿ ಬಂದಾಗ ನಿನ್ನ ಮಡಿಲು ನನಗೆ ತಂಪನೀಯಬಲ್ಲುದು ಎಂದು ಆಶಿಸಿದ್ದೇನೆ; ನನಗೆ ನಿರಾಸೆ ಮಾಡಲ್ಲ ತಾನೇ?...
ಮನೆಯಲ್ಲಿ ಅಪ್ಪ-ಅಮ್ಮನ ಒತ್ತಡಕ್ಕೆ ಮಣಿದು ಇನ್ನು ಕೆಲವು ದಿನಗಳಲ್ಲಿ ನಿನ್ನ ಅಧಿಕೃತ ಅನ್ವೇಷಣೆ ಶುರುವಾಗಲಿದೆ. ಇದುವರೆಗೂ ಕಾಣದ ನಿನ್ನ ಜೊತೆಗೂಡಿ ಸುಂದರ ಬಾಳಗೊಪುರ ಕಟ್ಟುವ ಕನಸು ಕಂಡಿದ್ದೇನೆ. ಇಷ್ಟು ದಿನ ನನ್ನ ಕೈಗೆ ಸಿಗದೆ ಸತಾಯಿಸಿದ್ದಕ್ಕೆ ನಿನ್ನೊಂದಿಗೆ ಸಿಕ್ಕಾಪಟ್ಟೆ ಜಗಳ ಆಡಬೇಕಿದೆ. . ನಿನ್ ಜೊತೆ ಬಹಳಷ್ಟು ಮಾತಾಡೋದಿದೆ. ತುಂಬ ಹುಡುಕಾಡಿಸಬೇಡ; ಬೇಗ ಸಿಕ್ಬಿಡು.
No comments:
Post a Comment